ಭಾವ ತುಂಬಿದ ಜೀವ ಇದು…

ಜೀವನ

ಬದುಕು ಪಲ್ಲವಿ ಇಲ್ಲದ ಹಾಡು
ಬದುಕು ಬವಣೆಗಳ ಗೂಡು
ಕನಸ ರಂಗೋಲಿ ಬಿಡಿಸಿ ನೋಡು
ಬೆಳಗುವುದು ನಿನ್ನ ಮನದ ಬೀಡು

– ವಿವೇಕ್ ನಂಬಿಯಾರ್

Advertisements

ಪರಂಪರೆ

ನಾನು ಬರಿಯ ಗೋಡೆ ಅಲ್ಲ

ಚಿತ್ತಾರ ಬಿಡಿಸಿಹರು ಎಲ್ಲಾ ನನ್ನಲಿ

ಹಲವು ಬಣ್ಣಗಳ ಗೂಢಾರ್ಥದಿ

ಸೂಚಿಸುವ ಕ್ಲಿಷ್ಟತೆಯ ಸಂದೇಶವ

ಹಚ್ಚಿಹರು ಬಣ್ಣಗಳ ಮಿಶ್ರಣದಿ

*****

ಒಬ್ಬರಿಗೆ ಗೋಡೆಯಲ್ಲಿ ಒಂದಿಷ್ಟ

ಮತ್ತೊಬ್ಬರಿಗೆ ಇನ್ನೊಂದು

ಇಷ್ಟವಾದಲೆಲ್ಲಾ ಹಚ್ಚುತ್ತಲೇ ಬಣ್ಣವ

ತಮಗಿಷ್ಟವಾದುದನ್ನು ಕಳೆಯುತಿಹರು

ತಮಗರಿವಿಲ್ಲದಂತೆ ಮರೆಯುತಿಹರು

*****

ಏನು ಮಾಡಿದರೂ ಸಂತೋಷವೇ

ಆದರೆ ವಿರೂಪಗೊಂಡರೆ ದುಃಖವಲ್ಲವೇ

ಅದಕ್ಕೆ ಗೋಡೆಗೆ ಈ ನೋವು ಈ ತರ

ತನ್ನನ್ನು ಕನಸ ಚಿತ್ತಾರಕೆ ಬಳಸದೆ

ವಿಕೃತಿಗೇಕೆ ಬಳಸುತ್ತಿದಾರೆಂದು

*****

ಹಲವು ಶತಮಾನಗಳಿಂದ ನಿಂತಿಹೆನು

ನನ್ನೆದೆಗೆ ಹಚ್ಚಿರಿ ಬಣ್ಣ ಎಂದು

ಅದರರ್ಥವ ಅರಿಯದ ಮೂಢಜನ

ವಿಕೃತ ಚಿತ್ತಾರದಿ ಕಳೆಗೆಡಿಸುತಿಹರು

ಐತಿಹಾಸಿಕ ಪರಂಪರೆ ಅಳಿಸುತಿಹರು

ಪರದೆ

ಏನೆಂದು ಹೆಸರಿಡಲಿ ಈ ಬಾಂಧವ್ಯಕೆ

ಪ್ರೀತಿ ಎನ್ನಲೇ ಸ್ನೇಹ ಎನ್ನಲೇ

ಎರಡೂ ಅಲ್ಲದ ಮೇಲೆ ಹೇಗಾಯ್ತು ಬಾಂಧವ್ಯ

ಹೊತ್ತು ಕಳೆಯುವ ಮೊದಲು ಉತ್ತರಿಸಬೇಕೇ

ಗೊತ್ತಿದ್ದರೂ ಗೊತ್ತಿಲ್ಲದಂತೆ ಉದ್ಧರಿಸಬೇಕೇ

ಸ್ನೇಹದ ಪರದೆಯ ಹಿಂದೆ ಅಡಗಿತ್ತು ಪ್ರೀತಿ

ಒಲವೆಂಬ ಮಿತಿಯ ದಾಟದಾಯಿತು ಸ್ನೇಹ

ಇಷ್ಟ ಕಷ್ಟ ಗಳ ಮಧ್ಯೆ ಮುರುಟಿತು ಒಲವು

ಯಾತನೆಯ ಮುಂದೆ ಮುಗುಳ್ನಕ್ಕಿತು ಸ್ನೇಹ

ಆ ನಗೆಯಲಿ ಲೀನವಾಯಿತು ಪ್ರೀತಿ

ಒಡಲಾಳದಿ ಪ್ರೀತಿ ಟಿಸಿಲೊಡೆದರೂ

ಹೃದಯದಲಿ ಸ್ನೇಹ ಉಕ್ಕಿ ಪಸರಿಸಿದರೂ

ನಗುವಲಿ ಒಲವ ಧಾರೆ ಬೆರೆತಿದ್ದರೂ

ಕರೆವಾಗಲೆಲ್ಲಾ ಜನಿಸುತ್ತಿದ್ದಳು ಆಕೆ

ಪ್ರೀತಿ-ಸ್ನೇಹ-ಒಲವೋ ಗೊತ್ತಿಲ್ಲದಂತೆ

ಸೂರ್ಯ ರಶ್ಮಿ

ಮುಂಜಾವಿನಲಿ ಭುವಿ ಆಕಳಿಸುತ್ತಿದ್ದಂತೆ

ಮಂಜಿನ ಬಿಂದುಗಳೆಲ್ಲಾ ಜಾರಿ ಹೋದಂತೆ

ಕನಸೆಂಬ ಪಠ್ಯ ಪುಸ್ತಕ ಮುಚ್ಚಿಕೊಂಡಿರಲು

ಸ್ತುತಿಯೊಂದಿಗೆ ದೃಷ್ಟಿ ತೆರೆದುಕೊಳ್ಳುವ ಮೊದಲು

ಭೂಮಿಯನ್ನು ಚುಂಬಿಸಿತ್ತು ಸೂರ್ಯರಶ್ಮಿ

ಹಿತವಾದ ಕಿರಣದಿಂದ ತಣಿದಿರಲು ಈ ಸೃಷ್ಟಿ

ಎತ್ತ ನೋಡಿದರತ್ತ ಹಬ್ಬಿಹುದು ವರ್ಣ ವೃಷ್ಟಿ

ಸುವರ್ಣ ಮಂಜ ಹನಿ ಕರಗಿದಂತೆಲ್ಲಾ

ಹೊಂಬಣ್ಣದ ವ್ಯಾಪ್ತಿ ಹರಡಿದಂತೆಲ್ಲಾ

ಭೂಮಿಯನ್ನು ಚುಂಬಿಸಿತ್ತು ಸೂರ್ಯ ರಶ್ಮಿ

ಕಾನನದ ಅಂಧಕಾರ ಮರೆಯಾಗುತ್ತಿರಲು

ಮನದಲ್ಲಿ ಮೌಢ್ಯ ಕೊನೆಯಾಗುತ್ತಿರಲು

ರಾತ್ರಿ ಕಳೆದು ಬೆಳಗು ಮೂಡಿದಾಗ

ಮುಂಜಾವಿಗೆ ಚಂದ್ರ ಕಳೆದುಹೋದಾಗ

ಭೂಮಿಯನ್ನು ಚುಂಬಿಸಿತ್ತು ಸೂರ್ಯ ರಶ್ಮಿ

ಸಮಾಪ್ತಿ

ಕನಸು ಕಾಣುತ್ತಿದ್ದ ಕಂಗಳು ಬಾಡಿಹೋಗಿವೆ

ಹೊಳೆಯುತ್ತಿದ್ದ ಮೊಗವು ಮಂಕಾಗಿದೆ

ನಿರೀಕ್ಷಿತ ಅನಿರೀಕ್ಷಿತತೆಯ ಮಧ್ಯೆ

ರೋಧಿಸುತ್ತಿದೆ ಆ ಮನಸ್ಸು ಪ್ರತಿ ಸಂಧ್ಯೆ

ಅತ್ತ ಶ್ಯಾಮನ ಬರುವಿಕೆಗಾಗಿ ಕಾದು

ಇತ್ತ ಮೂರು ಗಂಟಿಗೆ ತಲೆಯೊಡ್ಡಿ

ಮತ್ತೆ ಶ್ಯಾಮನ ನೆನಪು ಮರುಕಳಿಸದಂತೆ

ತಾಳಿಯ ಗಂಟು ಗಟ್ಟಿಯಾಗಿರಿಸಿದಳು

ತನ್ನೆದೆಯ ಸೆರೆಮನೆಯಲ್ಲಿ ಬಚ್ಚಿಟ್ಟು ಮಾತು

ಬಿಚ್ಚಿಡಲಾಗದೆ ತಳಮಳಿಸಿ ಇತ್ತು

ಮಾತು ಮೌನವಾಗುವ ಮೊದಲು

ಅಸ್ಪಷ್ಟವಾಗಿತ್ತು ಆ ಮಾತು ತೊದಲು

ಅಂತರಂಗದಿ ಮತ್ತೆ ತೆರೆ ಬೀಳುತ್ತಿರಲು

ಸೂತ್ರಧಾರಿ ಮತ್ತೆ ರಂಗಸ್ಥಳಕ್ಕೇರಲು

ಎಲ್ಲವೂ ಸಮಾಪ್ತಿಯಾದ ಘೋಷಣೆ

ಹಾಗೆಯೇ ಅದು ಯಾರಿಗೋ ಅರ್ಪಣೆ

                                        ವಿವೇಕ್ ನಂಬಿಯಾರ್

ದುಃಖ – ದುಮ್ಮಾನ

ಹಂಚಿಕೊಳ್ಳೆಂದು ಬಳಿಬಂದು

ಹರಿದು ಹಂಚಿ ಹೋದಳು

ತನ್ನೆದೆಗೆ ಒರಗಿ ಅಳು ಎಂದು

ನನ್ನೆದೆಗೆ ಇರಿದಳು…

ಉಮ್ಮಳಿಸುತ್ತಿದ್ದ ಅಳು ನನ್ನಲ್ಲಿ

ಭೋರ್ಗರೆಯುತ್ತಿದ್ದ ನಗು ಅವಳಲ್ಲಿ

ಹಣೆಬರಹದಲ್ಲಿ ರಾಡಿಯೆದ್ದಿತೋ..

ಬಹುಶಃ ರಾಡಿಯೆಬ್ಬಿಸಿದಳೋ ಏನೋ…

ಮೇಲ್ಪಂಕ್ತಿಯಲಿ ಭೋಗದ ನೆರಳು

ಆ ನೆರಳಲಿ ಬಡತನದ ಇರುಳು

ಭೋಗದೆದುರು ಬಡವನ ಮರೆತಿತ್ತು

ಸುಪ್ಪತ್ತಿಗೆಯ ಕಡಲು ಕೈಬೀಸಿ ಕರೆದಿತ್ತು

ಇನ್ನೂ ನನಗ್ಯಾಕೆ ಆ ಭೋಗದ ನೆವ

ಕಳೆದುಹೋದೆನೆಂಬ ಚಿಂತೆಯ ಭಾವ

ಇರಲು ಬದುಕೆಂಬ ನೊಗದ ಭಾರ

ಮರೆಯಬಹುದೇ ಇರುಳ ನೋವ…?

                                                              — ವಿವೇಕ್ ನಂಬಿಯಾರ್

ಗೆಳತಿ ಹೇಳಿದ ಕಥೆಯಲ್ಲಿ ಅವನೇ ಬಲಿಯಾದಾಗ…

ಮಂಗಳೂರು ವಿ ವಿ ಯಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಯುತ್ತಿದ್ದಂತೆ ವಿಭಾ ಕಾಲೇಜೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ಮಧ್ಯೆ ಮದುವೆಯಾಗುವಂತೆ ಪದೇ ಪದೇ ಪೀಡಿಸುತ್ತಿದ್ದ ಅವರದೇ ಜಾತಿಯವನಾದ ಸುಶೀಲ್ ಮತ್ತು ಆತನ ಚಿಕ್ಕಮ್ಮನ ಮಾತಿಗೆ ಜೋತುಬಿದ್ದು ಮನೆಯಲ್ಲೂ ಕೂಡಾ ತಿಳಿಸದೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಳು. ರಿಜಿಸ್ಟ್ರಾರ್ ಆಫೀಸ್ ನಲ್ಲಿ ಸಹಿ ಹಾಕಿ ಸುಶೀಲ್ ಆಸ್ಟ್ರೇಲಿಯಾಕ್ಕೆ ತೆರಳಿದ್ದ. ಅವರ ಮಧ್ಯೆ  ಇ-ಮೇಲ್ ಮುಖಾಂತರ ಸಂಪರ್ಕ ನಡೆಯುತ್ತಿತ್ತು. ಹೀಗಿರಲು ಒಂದು ದಿನ ವಿಭಾಳಿಗೆ ಸುಶೀಲ್ ಹಲವಾರು ಹುಡುಗಿಯರ ಜೊತೆ ದೈಹಿಕ ಸಂಬಂಧ ಹೊಂದಿರುವುದನ್ನು ತಿಳಿದು ಜಗಳವಾಡಿದ್ದಳು. ಹೀಗೆ ಕಾಡಿಬೇಡಿ ಆಗಿದ್ದ ರಿಜಿಸ್ಟರ್ ಮದುವೆ ಕೊನೆಗೊಳಿಸಲು ನಿರ್ಧರಿಸಿದ್ದಳು. ಅಲ್ಲಿಯವರೆಗೂ ಅವಳು ತನ್ನ ಮನೆಯವರಿಗೆ ವಿಷಯ ತಿಳಿಸಿರಲಿಲ್ಲ.

ಹೀಗಿರಲು ಒಂದು ದಿನ ತನಗೆ ಫೇಸ್ ಬುಕ್ ನಲ್ಲಿ ಯಾವಾಗಲೂ ಸಂದೇಶ ಕಳುಹಿಸುತ್ತಿದ್ದ ವಿ.ವಿ ಯಲ್ಲಿ ಹಿರಿಯ ವಿಧ್ಯಾರ್ಥಿಯಾಗಿದ್ದ ವಿಹಾನ್ ಜೊತೆಗೆ ಸ್ವಲ್ಪ ಸಲುಗೆ ಬೆಳೆಸಿಕೊಂಡಿದ್ದಳು. ತನ್ನೆಲ್ಲಾ ಕಥೆಯನ್ನು ಆಕೆ ಅವನಿಗೆ ತಿಳಿಸಿದ್ದಳು. ಅವರ ನಡುವಿನ ಸಲುಗೆ ಸ್ವಲ್ಪ ಸ್ವಲ್ಪವಾಗಿ ಮುಂದುವರಿದು ಹೋಗಿತ್ತು. ಮದುವೆಯ ಬಗೆಗಿನ ಎಲ್ಲಾ ಮಾತುಕತೆ ನಡೆದಿತ್ತು. ಹೀಗಿರಲು ಒಂದು ದಿನ ಆಕೆಯ  ಮನೆಯವರಿಗೆ ಆಕೆಯ ಹಳೆಯ ಕಥೆ ತಿಳಿಯಿತು. ಅವಳ ಮಾವ ಈ ವಿಷಯ ತಿಳಿದದ್ದೇ ತಡ ಸಿಡಿಮಿಡಿಗೊಂಡಿದ್ದರು. ತಮ್ಮ ಬಳಿ ಯಾವುದೇ ವಿಷಯ ತಿಳಿಸದ ಕಾರಣ, ವಿಭಾ ಸುಶೀಲ್ ನನ್ನೇ ಮದುವೆಯಾಗಬೇಕು, ಇದೇ ಅವಳಿಗೆ ಶಿಕ್ಷೆ ಎಂಬಂತೆ ಮಾತನಾಡಿದರು. ಕೊನೆಗೆ ಮಾತುಕತೆ ನಡೆದು ಸುಶೀಲ್ ನ ಮನೆಯವರು ಮುರಿದುಹೋಗಿರುವ ರಿಜಿಸ್ಟರ್ಡ್ ಮದುವೆಯನ್ನು ಕೊನೆಗೊಳಿಸಿ ಬೇರೆಯಾಗಲು ನಿರ್ಧರಿಸಿ ದೈವೋರ್ಸ್ ಗೆ ಅರ್ಜಿ ಸಲ್ಲಿಸಿದರು.

ಈ ಮಧ್ಯೆ ತನ್ನ ಮನೆಯಲ್ಲೂ ಜಗಳವಾಡಿ ವಿಭಾಳನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು ಮನೆಯವರನ್ನು ಒಪ್ಪಿಸಿದ್ದ ವಿಹಾನ್ ಆಕೆಯ ಎಲ್ಲಾ ಸಮಸ್ಯೆಗಳು ಪರಿಹಾರವಾದುದಕ್ಕೆ ಸಂತಸಗೊಂಡಿದ್ದ. ಇದ್ದಕ್ಕಿದ್ದಂತೆ ಜಾತಿ ಒಂದಾದರೂ ಭಾಷೆ ಮತ್ತು ಪ್ರಾಂತ್ಯದ ವಿಷಯದಲ್ಲಿ ಆಕೆಯ ಮನೆಯವರು ಒಪ್ಪದಿದ್ದಾಗ , ತಾನು ಪ್ರೀತಿಸುತ್ತಿದ್ದ ಹುಡುಗನ ಪ್ರೀತಿಯನ್ನು ಒಂದೇ ಏಟಿಗೆ ಕೊನೆಗಾಣಿಸಲು ನಿರ್ಧರಿಸಿದಳು. “ವಿಹಾನ್ ಇದು ಬದುಕಿನ ಸತ್ಯ. ನಾವು ನಮ್ಮ ಸಂಬಂಧವನ್ನು ಇಲ್ಲಿಗೇ ಕೊನೆಗೊಳಿಸೋಣ” ಅಂತ ವಿಭಾ ಹೇಳಿದಾಗ ಅವನ ಹೃದಯದ ಪ್ರಾಣಪಕ್ಷಿ ಅರ್ಧ ಹಾರಿಹೋಗಿತ್ತು. ತನ್ನ ಬದುಕಿನ ನೊಗಕ್ಕೆ ಜೊತೆಗಾತಿ ಸಿಕ್ಕಳು ಎಂದು ಹರ್ಷದಿಂದಿದ್ದ ವಿಹಾನ್ ಅಕ್ಷರಶಃ ಜೀವಕಳೆಯಿಲ್ಲದ ವಸ್ತುವಾಗಿಬಿಟ್ಟಿದ್ದ. ಆತ್ಮಹತ್ಯೆಯ ಆಲೋಚನೆಯೂ ಅವನ ಬಳಿ ಸುಳಿದಿತ್ತು. ಏನೂ ತಿಳಿಯದೆ ಕಂಗಾಲಾಗಿ ವಿಭಾಳ ಬಳಿ ಪರಿಪರಿಯಾಗಿ ತನ್ನ ಪ್ರೀತಿಯನ್ನು ಕೊಲ್ಲದಂತೆ ವಿಹಾನ್ ನಿವೇದಿಸಿಕೊಂಡ. ಆದರೆ ತನ್ನ ಹಿಂದಿನ ವ್ಯಥೆಗೆ, ಕಣ್ಣೀರಿಗೆ ಹೆಗಲು ಕೊಟ್ಟಿದ್ದ ವಿಹಾನ್ ನ ಪಾಲಿಗೆ ಕತ್ತನ್ನೇ ಕಡಿದ ಕೊಡಲಿಯಾಗಿಬಿಟ್ಟಳು. ಅವಳ ಮಾತುಗಳಿಗೆ, ಭರವಸೆಗೆ ಗಟ್ಟಿ ಕಲ್ಲಿನಂತಾಗಿದ್ದ ವಿಹಾನ್ ನ ಕಣ್ಣಿನಿಂದ ಅಶ್ರುಧಾರೆ ಸುರಿದಿತ್ತು. ಅವಳ ಕಥೆಗೆ-ವ್ಯಥೆಗೆ-ಕಣ್ಣೀರಿಗೆ ಭುಜಕೊಟ್ಟು ತನ್ನ ಬದುಕಿಗೆ ಆಕೆಯನ್ನೇ ಜೊತೆಯಾಗಿಸಲು ನಿರ್ಧರಿಸಿದ ವಿಹಾನ್, ಆಕೆ ಹೇಳಿದ ಕಥೆ ಕೇಳುತ್ತಾ ಕೇಳುತ್ತಾ ಬಲಿಯಾಗಿಹೋಗಿದ್ದ.

ತಮ್ಮ ಮಕ್ಕಳಿಗೆ ವಿಭಾ ಮತ್ತು ವಿಹಾನ್ ಅಂತಲೇ ಹೆಸರಿಡಲು ಸೂಚಿಸಿದ್ದ ವಿಭಾಳ ಮಾತುಗಳನ್ನು ಅರಗಿಸಿಕೊಳ್ಳಲಾಗದೇ ಭ್ರಮೆಯೋ, ಕನಸೋ ಎಂದು ತಿಳಿಯದೆ “ತನ್ನ ಮದುವೆ ಗೊತ್ತಾಗಿದೆ” ಎಂದು ವಿಭಾಳ ಸಂದೇಶ ಬರುವ ಹೊತ್ತಿಗೆ ಕನಸುಗಳಿಂದ ಮರೆಯಾಗಿ ಹೋಗಿದ್ದ. ಬಲಿಪೀಠದ ಮೇಲೆ ಕತ್ತಲು ಆವರಿಸಿತ್ತು. ಸಾವಿನ ಹಕ್ಕಿ ತನ್ನ ಇರುವಿಕೆಯನ್ನು ಸೂಚಿಸುತ್ತಿತ್ತು.


%d bloggers like this: