ಜನ್ಮ ತಾಳಿದ ಕ್ಷಣದಿಂದ
ಹೊಸ ಜೀವ ಸೆಲೆಯಾಸರೆಯಲಿ
ಕ್ಷಣ ಕ್ಷಣವೂ ನಿರ್ಭಿಡೆಯಿಂದ
ಸಾಗುತ್ತಿದೆ ಬದುಕಿನ ಈ ಪಯಣ

ತಾಯ ಉದರದಿಂದ ಲೋಕದೆಡೆಗೆ ಪಯಣ
ಬಾಲ್ಯದಲ್ಲಿ ಮುಗ್ದತೆಯ ಜೊತೆ ಪಯಣ
ಯೌವನದಲಿ ಛಲದ ಹಾದಿಯಲಿ ಪಯಣ
ವೃದ್ಧಾಪ್ಯದಿ ಮುಕ್ತಿ ಪಥದೆಡೆಗೆ ಪಯಣ

ಬದುಕಿನ ಪಯಣವದು ಸಿಹಿ ಕಹಿಯಂತೆ
ನಿಂತು ನಿಂತು ತಡವರಿಸಿ ಮತ್ತೆ ಸಾಗುತ್ತದೆ
ಅನುಭವದ ಮೇರೆಯನು ಮೀರಿ ಹೋಗುತ್ತದೆ
ಗುರಿಯ ಬಿಂದುವನು ತಾಕಿ ನಿಲ್ಲುತ್ತದೆ

ಯಾರು ಅರಿಯರು ಈ ಪಯಣದ ಕೊನೆಯೆಲ್ಲೆಂದು
ಸಾರ್ಥಕತೆಯೆಂಬ ಗುರಿಯ ಧ್ರುವವೆಲ್ಲೆಂದು
ಕನಸ ಗರ್ಭದಲಿ ಮಿಂಚಿ ಮರೆಯಾಗುವ
ಪಯಣದ ಮೂಲ ಉದ್ದೇಶ ಏನೆಂದು…?

ಹುಡುಕಿರುವೆ ಎದೆ ಕವಾಟವ ತೆರೆದು
ಶೋಧಿಸಿದೆ ಪ್ರತಿ ವಸ್ತುವ ತೆಗೆದು ಬದಿಗಿರಿಸಿ
ಎಲ್ಲಿವರೆಗೆ ಈ ಪಯಣ ಸಾಗುವುದೆಂದು
ಬದುಕೆಂಬ ಪಯಣದ ಅಂತ್ಯವೆಲ್ಲಿಯೆಂದು