ಭಾವ ತುಂಬಿದ ಜೀವ ಇದು…

Category Archives: ಲೇಖನ

ಎಲ್ಲೆಡೆಯೂ ಹರಡಿದ್ದು ಕೊನೆಗೊಮ್ಮೆ ಕರಗಿ ನೀರಾಗುವ ಆಕಾಶದಲ್ಲಿನ ಮೋಡದಂತೆ ಮನಸು ಕೂಡ. ಕಾರ್ಮುಗಿಲಿನಂತಹ ಸಮಸ್ಯೆಗಳಿದ್ದರೂ, ಬದುಕುವ ಛಲ ಇರುವವರಿಗೆ ಅದರಿಂದ ಹೊರಬರಲು ಕಷ್ಟವಾಗದು. ಗುರಿಯನ್ನು ಹುಡುಕುತ್ತಾ ಹೊರಟವನಿಗೆ ಗುರಿಮುಟ್ಟಲೇಬೇಕೆಂಬ ಛಲವಿದ್ದರೆ ಯಾವುದೇ ಅಡೆತಡೆಯೂ ಕಷ್ಟವೆನಿಸದು.

ಎಲ್ಲದರಲ್ಲಿಯೂ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸ್ಥಿರ ನಿರ್ಣಯಗಳನ್ನು ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬೇಕು. ನಿರೀಕ್ಷೆ, ಭರವಸೆ, ಕಾಯುವಿಕೆ ಯಾವತ್ತಿಗೂ ಕೂಡ ಹುಸಿಯಾಗುವ, ಹುಸಿಯಾಗಿಸುವ ವಿಚಾರಕ್ಕಾಗಿ ಮೀಸಲಿಡಬಾರದು. ಮನಸ್ಸು ಪ್ರಶಾಂತವಾದಾಗ ಇವೆಲ್ಲವನ್ನು ಸ್ವಲ್ಪಮಟ್ಟಿಗೆ ಮುಂಚಿತವಾಗಿ ಗೃಹಿಸಲು ಸಾಧ್ಯವಾಗುತ್ತದೆ. ಸರಿಯಾದ ಆಹಾರ, ನಿದ್ರೆ, ಯೋಗ, ಪ್ರಾಣಾಯಾಮಗಳು ಮಾನಸಿಕ ಚಾಂಚಲ್ಯವನ್ನು ತೊಡೆದು ಮನಸ್ಸನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ಇಡೀ ಶರೀರವನ್ನು ನಿಯಂತ್ರಿಸುತ್ತದೆ.


ಓ ನನ್ನ ಕಾವ್ಯ ಕನ್ನಿಕೆ… ನೀನಿಲ್ಲದೆ ಎಷ್ಟೋ ರಾತ್ರಿಗಳನ್ನು ಕಳೆದುಬಿಟ್ಟಿದ್ದೇನೆ. ಅದ್ಯಾಕೋ ಮನಸ್ಸು ಸಹಿಸುತ್ತಿಲ್ಲ ನೀನಿಲ್ಲದ ಕ್ಷಣಗಳನು.., ಯಾಕೋ ಏನೋ ನನ್ನ ಮನದ ಜೋಕಾಲಿ ಅನಾಥವಾಗಿ ಹೋಗಿದೆ. ನೀ ಬರುವಿಯೆಂದು ಇನ್ನೂ ಅದನ್ನು ಬಿಚ್ಚದೆ ಇಟ್ಟಿದ್ದೇನೆ. ನೀನಂದು ಕೊಟ್ಟ “ಉಡುಗೊರೆ”ಯನ್ನು ಪ್ರತಿ ದಿನವೂ ಮನಸ್ಸಿನಾಳದಿಂದ ತೆಗೆದು ನೋಡುತ್ತೇನೆ. ನಿನ್ನ ಇರುವಿಕೆ ಇಲ್ಲದ್ದಿದ್ದರೂ ಇದ್ದಂತೆ ಭಾಸವಾಗುವುದು ಅದರಿಂದಾಗಿ ಮಾತ್ರ. ಅದು ಕಲ್ಪನೆಯೆಓದು ತಿಳಿದಾಗ ಜೋರಾಗಿ ಅಳಲು ಪ್ರಯತ್ನಿಸುತ್ತೇನೆ… ಆದರೆ ಕಣ್ಣೀರೇ ಇಲ್ಲದ ಕಂಗಳಿಂದ ಹೇಗೆ ಅಳಲಿ..? ವಿಚಿತ್ರ ಅಲ್ವಾ? ಆದರೂ ಸತ್ಯ. ನಿನ್ನನ್ನು ಮೊದಲ ನೋಡಿದಾಗ ಕನಸ ಗೋಪುರಗಳನ್ನೆಲ್ಲಾ ಕಟ್ಟಿಕೊಂಡ್ಡಿದ್ದೆ. ಆಗ ನನಗೇನು ತಿಳಿದಿತ್ತು.., ಅದೆಲ್ಲ ಬರಿಯ ಗಾಳಿಗೋಪುರಗಳೆಂದು…?

ನಿನ್ನ ಮನದಲ್ಲಿ ನನ್ನ ಸ್ಥಾನ ಎಲ್ಲಿಯೆಂದು ತಿಳಿಯುತ್ತಿಲ್ಲ. ಆದರೂ ಅದರೊಳಗೆ ಬರಲು ಪ್ರಯತ್ನಿಸುತ್ತಿದ್ದೇನೆ… ಏನು…?!!! ಬರಬೇಡಾ ಅಂತಿದ್ದೀಯಾ? ಸರಿ ನಿನ್ನಿಷ್ಟ. ಆದರೆ ನನ್ನ ಮರೆತು ಬಿಡಬೇಡ. ನೀನಂದ್ರೆ ನನ್ಗೆ ತುಂಬಾನೇ ಇಷ್ಟ… ನೀನೇನಂದೆ…? “ನಿರ್ಧಾರಗಳು ನನದಲ್ಲ ಇನ್ನು” ಅಂತ ತಾನೇ..? ಆಯ್ತು ಬಿಡು. ನಿನ್ನ ನಿರ್ಧಾರ ಶಾಶ್ವತ ಅಲ್ಲ ಅಂತಾದ್ರೆ ನನ್ನ ಯಾಕೆ ಪ್ರೀತಿಸಿದೆ.? ಸುಮ್ನೆ ತಮಾಷೆ ಮಾಡೋಣಾ ಅಂತ ಅಂದ್ಕೊಂಡಿಯಾ.? ಕಷ್ಟ ಕಣೇ, ಪ್ರೀತಿ ಎಂಬ ಎರಡಕ್ಷ್ರರದ ಜಾಗಕ್ಕೆ ಸ್ನೇಹ ಸೇರಿಸುವುದಕ್ಕೆ…

ನಿನಗಿದೆಲ್ಲ ಅರ್ಥ ಆಗಲ್ಲ. ಯಾವತ್ತೂ ನನ್ನೇ ಹಳಿಯುತ್ತಿರುತ್ತೀಯಲ್ಲಾ.? ಈಗ್ಯಾಕೆ ನನ್ನ್ ಪುನಃ ಕಾಡುತ್ತಿದ್ದೀ..? ಬೇಡ ಕಣೇ, ಈ ಜೀವನವೇ ವ್ಯರ್ಥ ಅಂತ ಅನಿಸುತ್ತಿದೆ. ಇನ್ನೊಮ್ಮೆ ಕಾಡಿಸ್ಬೇಡ. ಇನ್ಯಾವತ್ತೂ ನಿನ್ನ ಹುಡುಕೋ ಪ್ರಯತ್ನ ಮಾಡೋದಿಲ್ಲ. ನೀ ಎಲ್ಲೇ ಇದ್ದರೂ ಹೇಗೇ ಇದ್ದರೂ ಸಂತೋಷದಿಂದಿರು, ಆದರೆ ನನ್ನ್ “ಸ್ನೇಹ” ಮಾತ್ರ ನಿನಗೆ ದೊರಕದ ಮರೀಚಿಕೆ.

ಕನಸು ಕಟ್ಟುವ ಮೊದಲೇ ತೆರೆಮರೆಗೆ ಸರಿದು ಹೋಗುತ್ತೀಯೆಂದು ಅಂದುಕೊಂಡಿರಲಿಲ್ಲ. ವಿಧಿ ಎಷ್ಟೊಂದು ಕ್ರೂರ ಅಲ್ವಾ.? ನಿಜಕ್ಕೂ ನನ್ಗೆ ಆ ವಿಧಿಯ ಮೇಲೆ ಹುಚ್ಚು ಪ್ರೀತಿ. ಒಂದು ದಿನ ಆ ವಿಧಿಯ ನಿರ್ಣಯಗಳನ್ನು ಬುಡಮೇಲುಗೊಳಿಸಿ ನನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತೇನೆ. ಅಬ್ಭಾ… ಎಂತಹಾ ಘೋರ ಅಲ್ವಾ ಈ ಏಕಾಂಗಿತನ…? ಅದೂ ಧೀರ್ಘವಾಗಿದ್ದಷ್ಟೂ ಗೊಂದಲಗಳನ್ನು ಸೃಷ್ಟಿಸುತ್ತಲೇ ಇರುತ್ತದೆ.

ಯಾಕೋ ಅರಗಿಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ ಇನ್ನೂ, ನೀನ್ಯಾಕೆ ಹೀಗಾದೆಯೆಂದು..? ನಾನು ಸಂತೋಷದಿಂದಿದ್ದೆ. ನನ್ನ ಜೀವನದಲ್ಲಿ ಸೆಳೆತದ ಪ್ರೀತಿಯ ಆಗಮನವಾಗಲೇಬರದಿತ್ತು. ಆದರೂ ಬಂತು. ಮತ್ತೆ ಮರೆಯಾಯಿತು. ಅದೊಂಥರಾ ಕಣ್ಣಾ ಮುಚ್ಚಾಲೆ ಆಟ. ಯಾಕೋ ಸಾಕಾಗಿ ಹೋಯಿತು ಕಣೇ. ಮನದ ಭಾವನೆಗಳನ್ನು ನಿಗ್ರಹಿಸಿಕೊಂಡು ನನ್ನ ಬೆಳವಣಿಗೆಯನ್ನು ಹಂತ ಹಂತವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಏನಾದರೂ ಸರಿ ಇನ್ನೊಮ್ಮೆ ಬಲಿಯಾಗೋದಿಲ್ಲ ಈ ಪ್ರೀತಿಯ ಮೋಹಕ ಬಲೆಗೆ ಅಂದುಕೊಂಡೆ. ಆದರೆ ನನ್ನ ಮನಸ್ಸು ಎಚ್ಚರಿಸಿತು. ಪ್ರೀತಿ… ಅದು ಬರೀ ಹುಚ್ಚಲ್ಲ. ಅದೊಂದು ಅನುಬಂಧ. ಶಾಶ್ವತತೆಯ ಆರಂಭ ಎಂದು.

ನನ್ನ ಮನಸ್ಸಿನ ಮಾತುಗಳಿಗೆ ಸೋತು ಮರಳಿ ಬರುತ್ತಿದ್ದೇನೆ. ಆದರೆ ಎಲ್ಲೂ ನನ್ನ ಕಣ್ಣಿಗೆ ಬೀಳಬೇಡ. ನನ್ನ ಮನಸ್ಸು ಮತ್ತೆ ಸಹಿಸೋ ಸ್ಥಿತಿಯಲ್ಲಿಲ್ಲ. ಇನ್ನೆಂದಿಗೂ ನನ್ನ ಕಾಡಬೇಡ. ಸ್ವಚ್ಛಂದವಾಗಿ ಹಾರಾಡುತ್ತಿರುತ್ತೇನೆ. ಕತ್ತರಿಸಬೇಡ ನನ್ನ ಆನಂದಭರಿತ ಕ್ಷಣದ ರೆಕ್ಕೆಗಳನು… ಹಾಗೇ ಮರೆಯಾಗಿಬಿಡು ಸುಮ್ಮನೆ, ನನ್ನ ದಾರಿಗೆ ಬೆನ್ನು ಹಾಕಿ…

ಇಂತಿ ನಿನ್ನ ಭರವಸೆಯಾಗಿದ್ದವ
ವಿವೇಕ್…


ಸಾಹಿತ್ಯ ಎನ್ನುವುದು ನಮ್ಮ ಮನಸ್ಸುಗಳನ್ನು ಬೇರೆ ಬೇರೆ ಪ್ರಕಾರಗಳ ಮೂಲಕ ಸುಸ್ಥಿತಿಯಲ್ಲಿಡುವ ಮಾದ್ಯಮ. ಕಥೆ, ಕಾದಂಬರಿ, ವಿಮರ್ಶೆ, ಲೇಖನ, ಕವನ, ಹಾಸ್ಯ, ಪ್ರಬಂಧ, ನಾಟಕ, ರೂಪಕ, ರಂಗ ಗೀತೆ, ಕಾವ್ಯ, ಸಿನೆಮಾ ಹೀಗೆ ಹತ್ತು ಹಲವು ಪ್ರಕಾರಗಳ ಮೂಲಕವಾಗಿ ಜನರನ್ನು ತಲುಪುವ ಮಾದ್ಯಮವಾದ ಸಾಹಿತ್ಯ ಅವರವರ ಅಭಿರುಚಿಗೆ ತಕ್ಕಂತೆ ಉಣಬಡಿಸುತ್ತದೆ. ಅಕ್ಷರಸ್ಥರಾದರೂ, ಅನಕ್ಷರಸ್ಥರಾದರೂ, ಎಲ್ಲರಿಗೂ ಅರ್ಥವಾಗುವಂತೆ ಸಾಹಿತ್ಯವನ್ನು ವಿಭಿನ್ನತೆಗಳಲ್ಲಿ ಜೋಡಿಸಿಕೊಂಡಿರುವುದು ಮಾನವನ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.

ಅನಾದಿ ಕಾಲದಿಂದಲೂ ಸಾಹಿತ್ಯಕ್ಕೆ ದೊರಕಿದಷ್ಟು ಮನ್ನಣೆ ಬೇರಾವುದಕ್ಕೂ ಸಿಕ್ಕಿರಲಿಕ್ಕಿಲ್ಲ. ಹಲವಾರು ರಾಜರ ಆಥಿತ್ಯದಲ್ಲಿ ಬೆಳೆದ ಹಲವಾರು ಕವಿಗಳು, ವಿದ್ವಾಂಸರುಗಳನ್ನು ಪಟ್ಟಿಮಾಡುತ್ತಾ ಹೋದರೆ ಕೊನೆಯೇ ಇಲ್ಲವೇನೋ…! 

Kalidasa

 

ಮಹಾಭಾರತವನ್ನು ಕಾವ್ಯಮಯವಾಗಿಸಿದ ಆದಿಕವಿ ಪಂಪ, ಕವಿ ಚಕ್ರವರ್ತಿ ರನ್ನ, ಕುಮಾರವ್ಯಾಸ, ಅರ್ಥಶಾಸ್ತ್ರವನ್ನು ಸಾಹಿತ್ಯ ರೂಪಕ್ಕಿಳಿಸಿದ ಕೌಟಿಲ್ಯ, ಈಗಿನ ಎಸ್ಸೆಮ್ಮೆಸ್ಸ್ ನ ಪೂರ್ವ ರೂಪವನ್ನು ಪ್ರತಿಬಿಂಬಿಸುವ ಕಾಳಿದಾಸನ ಮೇಘಸಂದೇಶ, ಹೀಗೆ ಹಲವಾರು ವಿಶೇಷಣಗಳಿಂದ ಕೂಡಿದ ಸಾಹಿತ್ಯವನ್ನು ನೀಡಿದವರು ಒಂದೆಡೆಯಾದರೆ, ಹಾಸ್ಯದ ಮೂಲಕ ವೈಚಾರಿಕ ಮೌಲ್ಯದ ಪರಿಚಯ ಹಾಗೂ ಅದರ ಸಾರವನ್ನು ತೆರೆದಿಡುತ್ತಿದ್ದ ತೆನಾಲಿರಾಮ, ತಿಮ್ಮರಸ, ಬೀರಬಲ್ಲರಂತಹ ಮೇಧಾವಿಗಳು ಮತ್ತೊಂದೆಡೆ ನಿರಂತರವಾಗಿ ಸಾಹಿತ್ಯದ ಪ್ರವಹಿಸುವಿಕೆಗೆ ಶ್ರಮಿಸುತ್ತಲೇ ಇದ್ದವರು.ಇವರೆಲ್ಲರ ಜೊತೆ ವಿದೇಶೀ ಯಾತ್ರಿಕರು, ಪ್ರವಾಸಿಗರು ಈ ಎಲ್ಲಾ ಸಾಹಿತ್ಯ ಭಂಡಾರವನ್ನು ತಮ್ಮ ಜೊತೆಗೆ ತರ್ಜುಮೆಗೊಳಿಸಿಕೊಂಡು ಹೋದರು. ಹೀಗೆ ಸಾಹಿತ್ಯದ ಬೆಳವಣಿಗೆಯಾಯಿತು. ಜಗತ್ತಿನ ಹಲವಾರು ಕೃತಿಗಳು, ನಾಟಕಗಳು, ಕಾವ್ಯಗಳು ನೂರಾರು ಭಾಷೆಗಳಿಗೆ ಅನುವಾದಗೊಳಿಸಲ್ಪಟ್ಟವು. ಬೇರೆಲ್ಲಿಯಾದರೂ ಗಡಿ ಸಮಸ್ಯೆ ಇದ್ದರೂ ಸಾಹಿತ್ಯಕ್ಕೆ ಅದರ ಪರಿವೆಯೇ ಇರಲಿಲ್ಲ. ಆದರೆ ಇಂದು ಸಂವಿಧಾನದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಮುನ್ನುಡಿಗೆ ಅರ್ಥವೇ ಇಲ್ಲದಂತಾಗಿದೆ. ಸಾಹಿತ್ಯ ಎಲ್ಲಾ ಕಟ್ಟಳೆಗಳಿಂದ ಹೊರತಾಗಿದ್ದರೆ ಒಳ್ಳೆಯದು. ಇಲ್ಲದ್ದಿದ್ದರೆ ಸಾಹಿತ್ಯದಲ್ಲಿ ಕಲ್ಮಶಗಳು ತೇಲಿಬಂದು ಅದರಲ್ಲಿನ ರಸಾಸ್ವಾದನೆಯ ಸುಗಂಧವನ್ನು ಹೊಡೆದೋಡಿಸಲಿವೆ. ಇದನ್ನು ಎದುರಿಸಲು ಪೂರ್ವಸಿದ್ಧತೆಯ ತಳಹದಿಯನ್ನು ನಿರ್ಮಿಸಬೇಕಾಗಿದೆ. ಅದಕ್ಕಾಗಿ…

ಕಟ್ಟೋಣ ಭದ್ರ ತಳಹದಿಯ

ಸಾಹಿತ್ಯವೇರಲಿ ಆ ಬುನಾದಿಯ ಮೇಲೆ

ಎಂದಿಗೂ ಅಲುಗದಿರಲಿ ತಳಹದಿ

ಸ್ಥಿರತೆಯ ಸಾರುವ ಭವ್ಯತೆಯ ಹೊತ್ತುಕೊಂಡು

ಅದಕ್ಕಾಗಿ ನನ್ನದೊಂದು ವಿನಂತಿ. ಸಾಹಿತ್ಯವನ್ನು ಉಳಿಸಿ, ಬೆಳೆಸಿ, ಪೋಷಿಸುವ ಹೊಣೆಗಾರಿಕೆ ನಮ್ಮ ಹೆಗಲ ಮೇಲಿದೆ. ಈ ಉದ್ದೇಶದ ಸಾಫಲ್ಯಕ್ಕಾಗಿ ಶ್ರಮಿಸೋಣ. ಭವ್ಯ ಭಾರತದ ಹಿರಿಮೆಗೆ ಸಾಕ್ಷಿಯಾಗಿರುವ ಸಾಹಿತ್ಯದ ಪ್ರವಾಹವನ್ನು ಯಾರಿಗೂ ಒಡ್ಡುಕಟ್ಟಿ ನಿಲ್ಲಿಸಲಾಗದಂತೆ ಪ್ರವಹಿಸಲು ಶ್ರಮಿಸೋಣ.


“ಪ್ರೀತಿ” ಎಂಬ ಎರಡಕ್ಷರದಲ್ಲಿದೆ “ಪ್ರೀ”ತಿಸು ಅಥವಾ “ತಿ”ರಸ್ಕರಿಸು…!!! ಎಂಬ ಮಾತು.. ಮನಸ್ಸು ಅನ್ನೋದು ಒಂದು ತಾವರೆಯ ಎಲೆಯ ಹಾಗೆ… ಅದರ ಮೆಲೆ ಬೀಳೋ ಪ್ರತೀ ಹನಿ ನೀರೂ ಅತ್ತಿತ್ತ ಆಟವಾಡುತ್ತಾ ಕೊನೆಗೊಮ್ಮೆ ಮರದಿಂದ ಕಾಯಿ ಉದುರಿ ಬಿದ್ದ ಹಾಗೆ ಕಳೆದು ಹೋಗುತ್ತದೆ. ಪ್ರೀತಿ ಅನ್ನೋ ಶಬ್ಧ ಕೂಡಾ ಅಷ್ಟೇ.. ಜಾಗರೂಕತೆಯಿಂದ ಬಳಸದೇ ಹೋದರೆ ಮತ್ತೆಂದೂ ಮರಳಿ ಬರೋದಿಲ್ಲ. “ಪ್ರೀತಿ” ಎಷ್ಟು ಹಿತವಾಗಿದೆ ಅಲ್ವಾ..

ಈ ಭೂಮಿ ಮೇಲೆ ಪ್ರೀತಿ ಇಲ್ಲದೇ ಇದ್ದಿದ್ದರೆ ಇಡೀ ವಿಶ್ವವೇ ಒಂದು ಸ್ಮಶಾನವಗುತ್ತಿತ್ತು ಅನ್ನೋ ಮಾತು ಎಷ್ಟು ಅರ್ಥಪೂರ್ಣ ಅಲ್ವಾ….? ಮಗುವಾಗಿರುವಾಗ ಹೆತ್ತವರ ಪ್ರೀತಿ, ಬೆಳೆಯುತ್ತಾ ಶಿಕ್ಷಕರ ಓರಗೆಯವರ ಪ್ರೀತಿ, ಯೌವನಾವಸ್ತೆಯಲ್ಲಿ ಗೆಳೆಯ/ಗೆಳತಿಯರ ಪ್ರೀತಿ, ಪ್ರೌಢಾವಸ್ಥೆಯಲ್ಲಿ ಬಾಳಸಂಗಾತಿಯ ಪ್ರೀತಿ, ಕೊನೆಗಾಲದಲ್ಲಿ ಮಕ್ಕಳ ಪ್ರೀತಿ… ಹೀಗೆ ಆರಂಭವಾಗಿ ಕೊನೆಯಗುತ್ತೆ ಪ್ರೀತಿ.


ಮೊನ್ನೆ ದಾರಿಯಲ್ಲಿ ಬರುವಾಗ ಸಿಕ್ಕಿದ್ದಳು ಗಂಗಾ. ಏನಮ್ಮಾ ಹೇಗಿದ್ದೀಯ ಅಂದಾಗ ಮುಖ ಮುಚ್ಚಿ ಅತ್ತಿದ್ದಳು. ತನ್ನ ಬದುಕು ಅನೈತಿಕತೆಯ ದಾರಿ ಹಿಡಿದು ಸಾಗುತ್ತಿರುವುದನ್ನು ತಿಳಿಸಿದ್ದಳು. ಆದರೆ ಇನ್ನು ಏನು ತಾನೆ ಮಾಡಿಯಾಳು…? ಕಾಲ ಮಿಂಚಿ ಹೋಗಿತ್ತು. ಜನರ ಬಾಯಲ್ಲಿ ಕಥೆಯಾಗಿತ್ತು.

ಗಂಗಾಳ ಕುಟುಂಬ ಸುಖೀ ಕುಟುಂಬವಾಗಿತ್ತು. ತಂದೆ, ತಾಯಿ, ಅಕ್ಕ, ತಂಗಿಯರನ್ನೊಳಗೊಂಡ ತುಂಬು ಸಂಸಾರ. ತಂದೆ ತಾಯಿ ಇಬ್ಬರೂ ಅನ್ಯ ಜಾತಿಯವರು. ಆದರೆ ನಮ್ಮ ಸಮಾಜದಲ್ಲಿ ಅರ್ಥಿಕತೆಯನ್ನು ಆಧರಿಸಿ ಜಾತಿ ನಿಶ್ಚಯವಾಗುತ್ತದೆ. ಈ ರೀತಿಯ ಬಾಳ್ವೆಯ ನಡುವೆ ಒಂದು ದಿನ ತಾಯಿ ಇಹಲೋಕ ತ್ಯಜಿಸಿದಳು. ತಂದೆಯ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ಬಿತ್ತು. ಅವರು ಮಕ್ಕಳನ್ನು ಓದಿಸಿ, ಬೆಳೆಸಿ ದೊಡ್ಡವರನ್ನಾಗಿಸುವ ವರೆಗೆ ತಮ್ಮ ಪ್ರೀತಿ ವಾತ್ಸಲ್ಯದ ಧಾರೆಯೆರೆದಿದ್ದರು. ಹೀಗೆ ಬೆಳೆದ ಮಕ್ಕಳನ್ನು ಒಮ್ಮೆ ಬಿಟ್ಟು ಹೋದಾಗ ಮಕ್ಕಳಿಗೆ ದಿಕ್ಕಿಲ್ಲದಂತಾಗಿ ಹೋಗಿತ್ತು. ಆ ಸಮಯಕ್ಕೆ ಇನ್ನೂ ಹರೆಯದಲ್ಲಿದ್ದ ಗಂಗಾಳ ಅಕ್ಕ ಸೇಲ್ಸ್ ಗರ್ಲ್ ಕೆಲಸಕ್ಕೆ ಸೇರಿಕೊಂಡಳು. ಆಗಿನ್ನೂ ಅವರ ತಂಗಿಗೆ ೪ ವಯಸ್ಸು. ಹೀಗೆ ಹೇಳಿ ನಿಲ್ಲಿಸಿದ್ದರು ಗಂಗಾಳ ಕುಟುಂಬದ ಕಥೆಯನ್ನು ಪಕ್ಕದ ಮನೆಯ ಲಕ್ಷೀ ಅಕ್ಕ.

ಒಟ್ಟಿಗೇ ನೋಡಿ ಬೆಳೆದಿದ್ದರೂ ಅವಳೊಂದಿಗೆ ಅಷ್ಟೊಂದು ಒಡನಾಟವಿರಲಿಲ್ಲ. ಈಗಲೂ ಇಲ್ಲ. ಹಾಗಂತ ಅವಳು ಕೆಟ್ಟವಳಲ್ಲ. ಊರಿನವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಳು. ಆದರೆ ಇಬ್ಬರು ಹೆಣ್ಣು ಮಕ್ಕಳ ಮನೆ ಕಚ್ಚೆ ಹರುಕರ ಪಾಲಿಗೆ ರಂಗಸ್ಥಳದಂತೆ ಗೋಚರಿಸಿತು. ಈಗೆಲ್ಲಾ ಆಧುನಿಕತೆ ಬೆಳೆದಿದೆ. ಆದರೆ ಹಿಂದೆ ಎಲ್ಲಾ ಸಿಂಪಲ್ ಆಗಿತ್ತು. ಬೀಡಿ ಕಟ್ಟುತ್ತಿದ್ದ ಗಂಗಾ ಒಬ್ಬಳೇ ಕುಳಿತುಕೊಂಡಿರಲು ಬೇಸರವಾಗಿ ಊರಿನ ಪಂಚಾಯತ್ ಸದಸ್ಯ ರಾಮನಾಥನ ಮನೆಗೆ ಹೋಗಿ ಆತನ ಪತ್ನಿ ಗಾಯತ್ರಿಯೊಂದಿಗೆ ದಿನವಿಡೀ ಕುಳಿತು ಹರಟೆ ಹೊಡೆಯುತ್ತಾ ಬೀಡಿ ಕಟ್ಟುವ ಕಾಯಕ ನಿರ್ವಹಿಸುತ್ತಿದ್ದಳು. ಹರಟೆಯ ನಡುವೆ ಟಿ.ವಿ ಧಾರಾವಾಹಿಗಳಲ್ಲಿ ಬರುವ ಸನ್ನಿವೇಶಗಳ ಬಗ್ಗೆ, ಹಾಸ್ಯ, ವ್ಯಂಗ್ಯ, ಕುತೂಹಲದ ಚರ್ಚೆಗಳು, ಇವೆಲ್ಲವುಗಳಿಂದ ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ. ಹೀಗಿದ್ದಾಗ ಒಂದು ದಿನ ರಾಮನಾಥನ ಮನೆಗೆ ಅವನ ಸಂಭಂಧಿಕನೊಬ್ಬ ಬಂದ. ಅದೊಂದು ಪೂರ್ವ ನಿರ್ಧಾರಿತ ಆಗಮನ. ರಾಮನಾಥನ ಪತ್ನಿ ತಾನೊಬ್ಬಳು ಹೆಣ್ಣು ಎಂದು ಯೋಚಿಸದೆ ಸಂಭಂಧಿಕನ ಇಚ್ಚೆಗೆ ಪೂರಕವಾಗಿ ನಡೆದುಕೊಳ್ಳುವಂತೆ ಗಂಗಾಳನ್ನು ಪ್ರೇರೇಪಿಸಿದಳು. ಏನೋ ಒಂದು ವಿಷ ಘಳಿಗೆಯಲ್ಲಿ ಬಾಲ್ಯದಿಂದ ಯೌವನದ ತೀವ್ರತೆಯೆಡೆಗೆ ಮುನ್ನಡೆಯುತ್ತಿದ್ದ ವಯಸ್ಸು ಹಾಗೂ ಮನಸ್ಸು ತಾಳ ತಪ್ಪಿತು. ರಾಮನಾಥನ ಮಡದಿಯ ಕುತಂತ್ರ ಹಾಗೂ ಆಕೆಯ ಸಂಭಂಧಿಕನ ಕಾಮದಾಸೆಗೆ ಬಲಿಯಾಗಿದ್ದಳು ಗಂಗಾ.

ಸಂಜೆ ಅಕ್ಕ ಮನೆಗೆ ಬಂದಾಗ ಗಂಗಾ ಆಕೆಗೆ ವಿಷಯ ತಿಳಿಸಿದ್ದಳು. ಯಾರಲ್ಲೂ ಈ ವಿಷಯ ಹೇಳುವುದು ಬೇಡ ಎಂದು ಅಕ್ಕ ಸಮಾಧಾನಪಡಿಸಿದಳು. ಆದರೆ ರಾಮನಾಥನ ಮಡದಿಗೆ ತನ್ನ ನಾಲಿಗೆಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಒಂದು ದುರ್ದ್ಯೆವದ ದಿನ ಆಕೆ ಸಾರಿಬಿಟ್ಟಳು. ಅಲ್ಲಿಗೆ ಆರಂಭವಾಯಿತು ಗಂಗಾಳ ಬದುಕಿನ ಅವನತಿ.

ಪ್ರತೀ ಬಾರಿಯೂ ಆಕೆಯನ್ನರಸಿಕೊಂಡು ಕಚ್ಚೆ ಹರುಕರ ಗುಂಪು ಬರುತ್ತಿತ್ತು. ಅಪ್ರಯತ್ನಪೂರ್ವಕವಾಗಿ ಆಕೆ ಆ ದುಷ್ಟ, ಹೇಯ ವರ್ತುಲದೊಳಗೆ ಸಿಲುಕಿಕೊಂಡಿದ್ದಳು. ಅಂತೂ ಇಂತೂ ಬಳಲಿ ಬೆಂಡಾಗಿದ್ದ ಗಂಗಾ ಕೊನೆಗೊಂದು ದಿನ ಹಳೆಯ ವಸ್ತುವಾಗಿ ಬದಲಾದಾಗ ಎಲ್ಲಾ ಗುಂಪು ಚದುರಿತು. ಆಕೆ ಮಾನಸಿಕವಾಗಿ ತುಂಬಾ ಜರ್ಜರಿತಳಾಗಿ ಹೋಗಿದ್ದಳು. ಆದರೆ ಎಷ್ಟೇ ಕಲುಷಿತವಾದರೂ ಗಂಗೆಯನ್ನು ಪಾವನೆ ಎಂದೇ ಪರಿಗಣಿಸಿದ ಯುವಕನೊಬ್ಬ ಆಕೆಯ ಜೀವನಾಧಾರಕ್ಕಾಗಿ ತನ್ನ ಬದುಕನ್ನೇ ನೀಡಿದ. ಆಕೆಯ ಬದುಕಿನಲ್ಲಿ ನವ ವಸಂತ ಚಿಗುರಿತು. ಅವಳ ಬದುಕು ಸಂತೋಷದಿಂದ ಮುನ್ನಡೆಯತೊಡಗಿತು…….ಮುನ್ನಡೆಯುತ್ತಿದೆ….

ಇದು ಬರೀ ಕಥೆಯಲ್ಲ..,ಸತ್ಯಕಥೆ. ಹೀಗೆ ಎಷ್ಟು ಗಂಗೆಯರ ಬದುಕು ಮುರುಟಿಹೋಗಿರಬಹುದು……? ದುಷ್ಟೆ ಗಾಯತ್ರಿಯಂತಹ ಧೂರ್ತೆಯರು ಇನ್ನೆಷ್ಟು ದುರ್ಬಲ ಹೆಣ್ಣು ಮಕ್ಕಳನ್ನು ಅನೈತಿಕತೆಯ ಹಾಳು ಕೂಪಕ್ಕೆ ತಳ್ಳುತ್ತಾರೋ ಏನೋ…..? ಗಂಗೆಯಂತೆ ಮರಳಿ ನೈತಿಕತೆಯೆಡೆಗೆ ಬರಲು ಸಾಧ್ಯವಾಗದ ಅದೆಷ್ಟು ಜೀವಗಳು ಈಗಲೂ ಆ ಕತ್ತಲೆಯ ಕೂಪದೊಳಗೆ ನರಳುತ್ತಿರಬಹುದು….? ಅವರಿಗೂ ಚೆನ್ನಾಗಿ ಬಾಳಿ ಬದುಕಬೇಕೆಂಬ ಆಸೆಯಿರುವುದು ಸಹಜ ತಾನೇ….?

ಹೀಗೆ ಈ ಸತ್ಯ ಕಥೆಯನ್ನು ನಿಮ್ಮಲ್ಲಿ ವಿವರಿಸಿದ್ದೇನೆ. ನಾನಂತೂ ಗಂಗಾಳ ಜೀವನದ ಕಥೆ ಕೇಳಿ ಅಧೀರನಾಗಿ ಹೋದೆ. ಅದು ಸಹಜ ಕೂಡ. ಹೆಣ್ಣು ಹೆಣ್ಣಿನಿಂದಲೇ ಶೋಷಿತಳಾಗುತ್ತಿರುವುದಕ್ಕೆ ಇದೊಂದು ಉದಾಹರಣೆ ಅಷ್ಟೇ. ಗಂಡಿನಿಂದ ಹೆಣ್ಣು ಶೋಷಿತಳಾಗಿಲ್ಲ ಎಂಬುದು ಇದರ ಅರ್ಥವಲ್ಲ. ಆದರೂ ತಲೆತಲಾಂತರಗಳಿಂದ ಹೆಣ್ಣು ಶೋಷಣೆಗೊಳಗಾಗುತ್ತಿದ್ದಾಳೆ. ಈ ಅಧುನಿಕತೆಯಲ್ಲಿ ಹೆಣ್ಣು ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿದ್ದಾಳೆ ಎಂದು ಘಂಟಾಘೋಷವಾಗಿ ಸಾರುವ ಈಗಿನ ಆಧುನಿಕ ಸಮಾಜ ಆಕೆ ಆಂತರಿಕವಾಗಿ ಶೋಷಿತಳಗುತ್ತಿರುವುದನ್ನು ಕಾಣುತ್ತಿಲ್ಲ.

ಇದನ್ನು ಗಮನಿಸಿ ಅವಳ ಬದುಕನ್ನು ರೂಪಿಸಲು ಶ್ರಮಿಸಿದರೆ ಇದೇ ಸಮಾಜ ಘೋಷಿಸುತ್ತಿರುವ “ಸ್ತ್ರೀ ಅಭಿವೃದ್ದಿಯೆಡೆಗೆ” ಎಂಬ ಮಾತು ಸಾಕಾರಗೊಳ್ಳಲು ಸಾಧ್ಯ. ಈವರೆಗೂ ಜಗದ್ಗುರು ಭಾರತದ ಮುನ್ನಡೆಗೆ ಸ್ತ್ರೀ ಬೆನ್ನೆಲುಬಾಗಿದ್ದಳು. ಇನ್ನು ಮುಂದೆಯೂ ನಮ್ಮ ಪ್ರತೀ ಅಭಿವೃದ್ದಿಯಲ್ಲೂ ಆಕೆಯ ಸಾರಥ್ಯ ಭಾರತದ ಮುನ್ನಡೆಗೆ ಅವಶ್ಯ……ಮುನ್ನಡೆಯೋಣ.